ಪಂಪಕವಿ ಮತ್ತು ಕೃತಿ  ಪರಿಚಯ 



೧. ಕನ್ನಡದ ಆದಿಕವಿ ಯಾರು ?
   * ಪಂಪ
೨.ದಕ್ಷಿಣ ಭಾರತದ ಇತಿಹಾಸದಲ್ಲಿ ೧೦ನೇ ಶತಮಾನ ಯಾವ ರಾಜರ ಆಳ್ವಿಕೆಯಲ್ಲಿತ್ತು?
✍ರಾಷ್ಟ್ರಕೂಟರ ಆಳ್ವಿಕೆ.

೩.ಪಂಪಕವಿ ತನ್ನ ಕೃತಿ ರಚನೆಯನ್ನು ರಾಷ್ಟ್ರಕೂಟರ ಯಾವ ದೊರೆಯ ಕಾಲದಲ್ಲಿ ಮಾಡಿದನು?
✍ಮೂರನೇ ಕೃಷ್ಣ

೪.ಗೆದ್ದರೆ ಲಕ್ಷ್ಮೀ ಸತ್ತರೆ......
✍ವೀರ ಸ್ವರ್ಗ.

೫.೧೦ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಯಾವ ಎರಡು ಧರ್ಮಗಳು ಪ್ರಬಲವಾಗಿದ್ದವು?
✍ಜೈನ ಮತ್ತು ವೈದಿಕ

೬.ಪಂಪಯುಗವೆಂದು ಯಾವ ಶತಮಾನವನ್ನು ಕರೆಯುತ್ತಾರೆ?
✍೧೦(ಹತ್ತನೇ)ಶತಮಾನ.

೭.೧೦(ಹತ್ತನೇ)ಶತಮಾನದಲ್ಲಿ ಯಾವ ಎರಡು ಭಾಷೆಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಜರಗುತ್ತಿದ್ದವು?
✍ಸಂಸ್ಕೃತ ಮತ್ತು ಕನ್ನಡ.

೮.ಪಂಪಯುಗವನ್ನು ಸ್ವರ್ಣಯುಗವೆಂದು ಕರೆಯಲು ಕಾರಣ?
✍ಪ್ರೌಢ ಸಾಹಿತ್ಯ ರಚನೆ.

೯.ಪಂಪಯುಗದಲ್ಲಿ ಯಾವ ಶೈಲಿಯಲ್ಲಿ ಕೃತಿ ರಚನೆಯಾಗಿದೆ?
✍ಚಂಪೂ ಶೈಲಿಯಲ್ಲಿ

೧೦.ಪಂಪಯುಗವನ್ನು ಇತರ ಯಾವ ಹೆಸರುಗಳಿಂದ ಕರೆಯುತ್ತಾರೆ?
✍ಜೈನಯುಗ, ಚಂಪೂಯುಗ, ವೀರಯುಗ.

೧೧.ಪಂಪ ತನ್ನ ಒಂದು ಕೃತಿಯನ್ನು ಧರ್ಮಕ್ಕೂ, ಇನ್ನೊಂದನ್ನು------ಕ್ಕೂ ಮೀಸಲಾಗಿರಿಸಿದ್ದಾನೆ?
✍ಲೌಕಿಕ್ಕೆ

೧೨.ರತ್ನತ್ರಯರು ಯಾರು ಯಾರು?
✍ಪಂಪ, ಪೊನ್ನ, ರನ್ನ,

೧೩."ಪಸರಿಪ ಕನ್ನಡಕ್ಕೊರ್ವನೆ ಸತ್ಕವಿ ಪಂಪನಾವಗಂ" ಎಂದವರು ಯಾರು?
✍ನಾಗರಾಜ ಕವಿ.

೧೪.ಪಂಪನ ಪೂರ್ವಜರು ಯಾವ ಪ್ರದೇಶಕ್ಕೆ ಸೇರಿದವರು?
✍ಆಂದ್ರದ ವೆಂಗಿಮಂಡಲದ ವೆಂಗಿಪಳು.

೧೫.ಪಂಪನ ತಂದೆ ತಾಯಿ ಯಾರು?
✍ತಂದೆ-ಭೀಮಪ್ಪಯ್ಯ, ತಾಯಿ- ಅಬ್ಬಣಬ್ಬೆ.

೧೬.ಪಂಪನ ಜನನ ಯಾವಾಗ ಆಯಿತು.
✍೯೦೨

೧೭.ಪಂಪನ ಕಾವ್ಯದ ಭಾಷೆ.
✍ತಿರುಳಗನ್ನಡ.

೧೮.ಪಂಪನು ತನ್ನ ಯಾವ ಕೃತಿಯಲ್ಲಿ ಬನವಾಸಿಯನ್ನು ಹೃದಯಂಗಮವಾಗಿ ಬಣ್ಣಿಸಿದ್ದಾನೆ?
✍ವಿಕ್ರಮಾರ್ಜುನ ವಿಜಯ(ಪಂಪಭಾರತ)

೧೯.ಪಂಪನ ಆಶ್ರಯಧಾತ ಯಾರು?
✍ಚಾಲುಕ್ಯರ ಅರಿಕೇಸರಿ.

೨೦.ಪಂಪ ತನ್ನ ಜೀವನೋಪಾಯಕ್ಕಾಗಿ ಎಲ್ಲಿ ಹೋಗಿ ನೆಲಸಿದ?
✍ವೇಮಲವಾಡ.

೨೧.ಗುಣಾರ್ಣವ ಬಿರುದು ಹೊಂದಿದವರು?
✍ಅರಿಕೇಸರಿ.

೨೨.ಬೆಳಗುವಿನಿಲ್ಲಿ ಲೌಕಿಕಮನ್ ಅಲ್ಲಿ--------.
✍ಜಿನಾಗಮಮಂ(ಇದು ವಿಕ್ರಮಾರ್ಜುನ ವಿಜಯದಲ್ಲಿ ಬಂದಿದೆ)

೨೩.ಪಂಪ, ಆದಿಪುರಾಣ ಮತ್ತು ಪಂಪಭಾರತ(ವಿಕ್ರಮಾರ್ಜುನ ವಿಜಯ)ವನ್ನು ಎಷ್ಟು ದಿನಗಳಲ್ಲಿ ಬರೆದನು?
✍ಆದಿಪುರಾಣವನ್ನು(ಮೂರು ತಿಂಗಳು)
ಪಂಪಭಾರತವನ್ನು(ಆರು ತಿಂಗಳು)

೨೪.ಪಂಪನ ಎರಡು ಕೃತಿಗಳು ಯಾವುವು?
✍ಆದಿಪುರಾಣ.
ಪಂಪಭಾರತ(ವಿಕ್ರಮಾರ್ಜುನ ವಿಜಯ)

೨೫.ಪಂಪನ ಪೂರ್ವಜರ ಗೋತ್ರಾ ಯಾವುದು?
✍ಶ್ರೀ ವತ್ಸಗೋತ್ರ.

೨೬.ಅರಿಕೇಸರಿ ಪಂಪನಿಗೆ ಯಾವ ಗ್ರಾಮವನ್ನು ದಾನವಾಗಿ ನೀಡಿದ?
✍ಧರ್ಮಪುರ.

೨೭.ರಾಷ್ಟ್ರಕೂಟ ಚಕ್ರವರ್ತಿಗಳ   ಸಾಮಂತರು ಯಾರು?
✍ಚಾಳುಕ್ಯರು.

೨೮.ಪಂಪನ ಗುರುವಿನ ನಾಮವೇನು?
✍ಶ್ರವಣಬೆಳಗೊಳದ ದೇವೇಂದ್ರಮುನಿ.

೨೯.ಇಮ್ಮಡಿ ಅರಿಕೇಸರಿಯ ತಂದೆ ತಾಯಿ ಯಾರು?
✍ಜೇಕವ್ವೆ ತಾಯಿ
ನರಸಿಂಹ ತಂದೆ.

೩೦.ಆದಿಪುರಾಣದಲ್ಲಿ ಎಷ್ಟು ಆಶ್ವಾಸಗಳಿವೆ?
✍ಹದಿನಾರು(೧೬)

೩೧.ಆದಿಪುರಾಣ ಎಂತಹ ಕಾವ್ಯ?
✍ಧಾರ್ಮಿಕ/ಆಗಮಿಕ

೩೨.ಕದಳೀಗರ್ಭಶ್ಯಾಮಂ
ಮೃದುಕುಟಿಲಶಿರೋರುಹಂ
ಸರೋರುಹವದನಂ ಮೃದುಮಧ್ಯಮತನು.
ಹಿತಮಿತ!ಮೃದುವಚನ ಲಲಿತ
‌ಮಧುರಸುಂದರಂ ವೇಷ. ಈ ಮಾತನ್ನು ಯಾರು ಯಾವುದನ್ನು ಕುರಿತು ಹೆಳಿದ್ದದ್ದು?
✍ಪಂಪ ತನ್ನ ಶರೀರ ಪರಿಚಯ ಮಾಡಿದ್ದಾನೆ.

೩೩.ಆದಿಪುರಾಣದ ಮೂಲ ಯಾವ ಕೃತಿ?
✍ಜೀನಸೇನಾಚಾರ್ಯರ ಪೂರ್ವಪುರಾಣ.

೩೪.ಬೆಳ್ವೊಲು ಎಲ್ಲಿ ಕಂಡು ಬರುತ್ತದೆ?
✍ಧಾರವಾಡ

೩೫.ಯಾವ ಶಾಸನದಿಂದ ಜಿನವಲ್ಲಬ ಪಂಪನ ತಮ್ಮನೆಂದು ತಿಳಿದು ಬರುತ್ತದೆ?
✍ಆಂದ್ರದ ಕರೀಂನಗರದ ಬೊಮ್ಮಲು ಗುಟ್ಟಿಯಲ್ಲಿ ದೊರೆತ ಕುರ್ಕ್ಯಾಲ ಶಾಸನ.

೩೬.ಪಂಪನ ಬಿರುದಗಳು
☄ಕವಿತಾ ಗುಣಾರ್ಣವ
☄ಸರಸ್ವತಿ ಮಣಿಹಾರ
☄ಸಂಸಾರ ಸಾರೋದಯ
☄ಕನ್ನಡದ ಆದಿಕವಿ
☄ನಾಡೋಜ
☄ಸುಕವಿಜನ ಮಾನಸೊತ್ತಂಸ
☄ಮಹಾಕವಿ
☄ರತ್ನತ್ರಯ
☄ಪುರಾಣ ಕವಿ

೩೭.ಮನುಷ್ಯರೆಂದರೆ ಯಾರು ಎಂಬುದಾಗಿ ಯೋಚಿಸುವವರಿಗೆ ಪಂಪನು ಏನೆಂದು ಹೇಳಿದನು?
✍ಮನುಷ್ಯಜಾತಿ ತಾನೊಂದೇವಲಂ.
ಇದು ಆದಿಪುರಾಣದಲ್ಲಿದೆ

 ಪಂಪನ ಕೃತಿಗಳು


ಪಂಪನು ಒಂದು ಧಾರ್ಮಿಕ ಕಾವ್ಯವನ್ನು ಮತ್ತೊಂದು ಲೌಕಿಕ ಕಾವ್ಯವನ್ನು ರಚಿಸಿದ್ದಾನೆ. ಪಂಪನ ಮೊದಲನೆಯ ಕೃತಿ ಆದಿಪುರಾಣ. ಎರಡನೆಯ ಕೃತಿ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ.

    ಪಂಪಭಾರತ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.   ಈ ಕಥೆಯ ನಾಯಕ ಅರ್ಜುನ.    ಇಲ್ಲಿ ಪಂಪ ತನ್ನ ಆಶ್ರಯದಾತ,ಮಿತ್ರನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.     ಈ ಕೃತಿಯ ಪ್ರಕಾರ ದ್ರೌಪದಿ ವಿವಾಹವಾಗುವುದು ಅರ್ಜುನನನ್ನು ಮಾತ್ರ.ತನ್ನ ರಾಜ ಅರಿಕೇಸರಿಗೆ ಹೋಲಿಸಿ ಬರೆದ ಕಾರಣ ಪಂಪ ಮಹಾಭಾರತದ ಕಥೆಯಲ್ಲಿ ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಅಸಾಧಾರಣವಾದ ಪ್ರತಿಭೆ ಹಾಗೂ ಸೌಂದರ್ಯದಿಂದ ಕೂಡಿದ ಈ ಕಾವ್ಯದ ಕೊನೆಯಲ್ಲಿ ಅರ್ಜುನನೊಡನೆ ಸಿಂಹಾಸನವನ್ನೇರುವವಳು ಸುಭದ್ರೆ! ಇವನು ಹತ್ತನೆಯ ಶತಮಾನಕ್ಕೆ ಸೇರಿದವನು.ಪಂಪಭಾರತ ಕಾವ್ಯವು ಗದ್ಯ ಪದ್ಯ ಮಿಶ್ರಣದ ಒಂದು ಚಂಪೂ ಕಾವ್ಯ.ಪಂಪ ಕವಿ ತನ್ನ ಕಥಾಭಿತ್ತಿಯಾಗಿ ಆರಿಸಿಕೊಂಡಿದ್ದು ಸಂಸ್ಕೃತ  ವ್ಯಾಸಭಾರತ ಕಥೆ.[೨] ಕನ್ನಡ ಭಾಷೆಯ ಆದಿಕಾವ್ಯವಾಗಿರುವುದು ಇದರ ವೈಶಿಷ್ಟ್ಯ.ಹಿಂದಿನ ಪ್ರಸಿದ್ಧ ಮಹಾಕಾವ್ಯಗಳಂತಲ್ಲದೆ ನಗರ,ಸಮುದ್ರ, ಪರ್ವತ, ಋತು ಮುಂತಾಗಿ ಪ್ರಸಿದ್ಧವಾಗಿರುವ 18 ವರ್ಣನೆಗಳಿಗೆ ಯಥೋಚಿತ್ತವಾಗಿ ಪ್ರಾಮುಖ್ಯಕೊಟ್ಟು ನಾಯಕನೊಬ್ಬನ ಚರಿತ್ರೆಯ್ನು ಅವನ ಜನನದಿಂದ ಮೊದಲ್ಗೊಂಡು ಅವನು ಅತಿಶಯವಾದ ಅಭ್ಯುದಯವನ್ನು ಪಡೆಯುವವರೆಗೆ ವರ್ಣಿಸಿರುವುದು ಈ ಕಾವ್ಯದ ಸಾಮಾನ್ಯ ಲಕ್ಷಣವಾಗಿದೆ. ಇದರಲ್ಲಿ 14 ಆಶ್ವಾಸಗಳಿವೆ. ಇಲ್ಲಿಯೂ ನಡುನಡುವೆ ಸಣ್ಣ ದೊಡ್ಡ ಗದ್ಯಖಂಡಗಳು ದಟ್ಟವಾಗಿ ಹೆಣೆದುಕೊಂಡು ವಿವಿಧ ಪದ್ಯಜಾತಿಗಳ 1609 ಪದ್ಯಗಳಿವೆ. ಈ ಪದ್ಯಜಾತಿಗಳಲ್ಲಿ ಕಂದಪದ್ಯಗಳೂ ಆ ಬಳಿಕ ಖ್ಯಾತ ಕರ್ಣಾಟಕಗಳು ಸಂಖ್ಯಾಬಾಹುಳ್ಯ ಪಡೆದಿವೆ. ರಗಳೆ, ಪಿರಿಯಕ್ಕರಗಳು ಇಲ್ಲಿ ಕಂಡುಬರುತ್ತವೆ. ಪಂಪಕವಿಯೇ ಹೇಳುವಂತೆ ಇದು ಆರು ತಿಂಗಳಲ್ಲಿ ಬರೆದು ಮುಗಿಸಿದನಂತೆ ಇದರ ರಚನೆಯ ಭಾಷೆ ಶೈಲಿಗಳ ಹದ ಇಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರುತ್ತದೆ ಹೀಗೆ ವ್ಯಾಸಭಾರತದಂತಹ ಒಂದು ದೊಡ್ಡಗ್ರಂಥದ ಕಥಾವಸ್ತುವನ್ನು ಸಮಗ್ರವಾಗಿ,ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ.




ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ


    ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.

ಅತಿಸುಭಗೆಗೆ ಸಂದಂ ಸರ
ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ
ಕೃತಿಯವೊಲೆಸೆದಪುದು ಜಗ
ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ


    ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ


    ‘ಪರಮಜಿನೇಂದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.

   ಸರಸ್ವತಿ ಎಂದರೆ ಹೆಣ್ಣರೂಪವನ್ನು ಧರಿಸಿದ ದೇವತೆ ಎಂಬ ಪೌರಾಣಿಕ ಕಲ್ಪನೆಯನ್ನು ನಿರಾಕರಿಸಿ, ಪಂಪನು ಜೈನಪರಂಪರೆಗೆ ಅನುಗುಣವಾಗಿ ಸರಸ್ವತಿಯನ್ನು ಪರಿಭಾವಿಸಿದ್ದಾನೆ. ಆದರೆ ವೈದಿಕ ಪಂರಂಪರೆಯಂತೆಯೇ ಜೈನರಲ್ಲಿಯೂ ಸರಸ್ವತಿಯು ವಾಗ್ದೇವತೆ; ವಿದ್ಯಾಧಿದೇವತೆಯೂ ಹೌದು. ಭಾವಿಸುವ, ಓದುವ, ಆಲಿಸುವ ಪೂಜಿಸುವ ಆದರಿಸುವವರಿಗೆ ನಿತ್ಯಸೌಖ್ಯವನ್ನು ಉಂಟುಮಾಡುವುದು ವಾಕ್. ಆ ವಾಕ್ಕಿಗೆ ದೇವತೆಯಾದ ಸರಸ್ವತಿಯು ಎಲ್ಲರಿಗೂ ವಾಗ್ವಿಳಾಸವನ್ನು ಮಾಡಲಿ ಎಂಬಲ್ಲಿ ಸರಸ್ವತಿಯನ್ನು ಕುರಿತಾದ ವೈದಿಕ ಪರಿಕಲ್ಪನೆ ಮುಂದುವರೆದಿದೆ.

    ‘ಪರಮಜಿನೇಂದ್ರವಾಣಿಯೆ ಸರಸ್ವತಿ, ಅವಳು ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತವಳಲ್ಲ’ ಎಂದು ಸಾರಿದ ಪಂಪ ತನ್ನ ಕಾವ್ಯಗಳಲ್ಲಿಯೇ ಸರಸ್ವತಿಗೆ ಹೆಣ್ಣಿನ ರೂಪವನ್ನು ತೊಡಿಸಿರುವುದುಂಟು. ‘ಅತಿಸುಭಗಗೆ ಸಂದ.......’ ಎಂಬ ಪದ್ಯದಲ್ಲಿ ಪಂಪ ಮಾಡಿಕೊಂಡಿರುವ ಆತ್ಮಶ್ಲಾಘನೆಯಲ್ಲಿ ಸರಸ್ವತಿಯು ಸ್ತ್ರೀರೂಪದಲ್ಲಿದ್ದಾಳೆ. ಆತನು ‘ತಾನೇ ಆಕೆಗೆ ಮಣಿಹಾರ’ ಎನ್ನುತ್ತಾನೆ. ಪ್ರತಿ ಅಧ್ಯಾಯದ ಮೊದಲ ಪದ್ಯದಿಂದಲೇ ಚಕ್ರವರ್ತಿಯಾದ ಭರತ, ಜಿನನಾದ ಆದಿನಾಥ ಮೊದಲಾದವರನ್ನೆಲ್ಲಾ ಸರಸ್ವತಿಯ ಕೊರಳಿನ ಮಣಿಹಾರವಾಗಿಸುತ್ತಾನೆ. ಹೀಗೇಕೆ? ಆದರೆ, ಆತನೆಲ್ಲೂ ‘ಸರಸ್ವತಿಯನ್ನು ಸ್ತ್ರೀರೂಪದಲ್ಲಿ ಚಿತ್ರಿಸುವುದಿಲ್ಲ’ ಎಂದು ಹೇಳಿಲ್ಲ. ‘ಹೆಣ್ಣರೂಪದಲ್ಲಿ ಸರಸ್ವತಿಯನ್ನು ಬಣ್ಣಿಸಲೇಬಾರದೆಂದು ಅವನೇನು ಹಟತೊಟ್ಟಿರಲಿಲ್ಲವೆಂದೂ, ಮೂಲಭೂತ ಅರ್ಥವನ್ನು ನಿರ್ವಚನ ಮಾಡಬೇಕೆಂದು ಬಯಸಿದ್ದನೆಂದೂ ತಿಳಿದುಕೊಳ್ಳಬಹುದು.’ ಕವಿ ಪ್ರತಿಮಾಪ್ರಿಯ ಮತ್ತು ಪ್ರಯೋಗಪ್ರಿಯ. ಕವಿ ಹೊಸಹೊಸತನ್ನು ಸೃಷ್ಟಿಸುವ ಅಭಿನವ ಸೃಷ್ಟಿಕರ್ತ ಎಂಬ ಮಾತಿಗೆ ಪಂಪನೇ ಸಾಕ್ಷಿ. ಪರಮಜಿನೇಂದ್ರವಾಣಿಯೆ ಸರಸ್ವತಿ ಎಂದು ಹೇಳಿದ ‘ಆದಿಪುರಾಣ’ದಲ್ಲಿಯೇ ಪಂಪ, ಸರಸ್ವತಿಯನ್ನು ವಾಗ್ವಧುವನ್ನಾಗಿಯೂ ಚಿತ್ರಿಸಿದ್ದಾನೆ. ‘ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರ ಚರಿತದೊಳ್ ವಾಕ್ಯಮಾಣಿಕ್ಯಕೋಶಂ’ ಎನ್ನುತ್ತಾನೆ. ಆದಿತೀರ್ಥೇಶ್ವರ ಚರಿತ್ರೆಯಲ್ಲಿ ವಾಕ್ಯಗಳೆಂಬ ಮಾಣಿಕ್ಯಗಳ ಕೋಶಕ್ಕೆ ವಾಗ್ವಧೂ ಅಂದರೆ ಸರಸ್ವತಿಯೇ ಮುದ್ರೆಯೊತ್ತಿದ್ದಾಳಂತೆ! ಪಂಪನಿಗೆ ತನ್ನ ಕಾವ್ಯಗಳ ಶ್ರೇಷ್ಠತೆಯ ಬಗ್ಗೆ ಅಷ್ಟೊಂದು ವಿಶ್ವಾಸ.

ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕೃತಿಯಲ್ಲಿ,

ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾನಾವನುಮಿಲ್ಲೆನಲ್ ತದ
ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ


ಎಂದು ಪ್ರಾರ್ಥಿಸಿದ್ದಾನೆ. ಸರಸ್ವತಿಯು, ಅರಿಗ ಅಂದರೆ ಅರಿಕೇಸರಿಗೆ ನಿಷ್ಕಲ್ಮಷವಾದ ಬುದ್ಧಿಯನ್ನು ಕೊಡಲಿ ಎಂಬುದು ಕವಿಯ ಆಶಯ. ಆದರೆ ಆತ ಸರಸ್ವತಿಗೆ ಆರೋಪಿಸಿರುವ ಒಂದೊಂದು ಗುಣವೂ ವಿಚಾರಯೋಗ್ಯ. ವಾಙ್ಮಯಕ್ಕೆ ನಾಶವೆಂಬುದು ಒಂದಿನಿತೂ ಇಲ್ಲ. ಕೇಳಿದ ಮಾತ್ರಕ್ಕೇ ವಾಙ್ಮಯದ ಕೊನೆಯನ್ನು ತಿಳದವನು ಯಾವನೂ ಇಲ್ಲ. ವಾಙ್ಮಯ ಎಂಬುದು ತನಗೆ ತಾನೇ ಅಕ್ಷಯನಿಧಿ ಆಗಿರುವುದು. ಪ್ರೀತಿಯಿಂದ ಸೇವಿಸಿದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆನ್ನಿಸುವುದು ವಾಙ್ಮಯ. ಅಂತಹ ಸಮಸ್ತ ವಾಙ್ಮಯಕ್ಕೆ ಸರಸ್ವತಿಯು ತಾಯಿಯಾಗಿದ್ದಾಳೆ. ಒಬ್ಬ ವ್ಯಕ್ತಿ ಗಳಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು. ಬೇರೆಯವರು ಕಿತ್ತುಕೊಳ್ಳಬಹುದು. ಅದು ತನ್ನಿಂದ ತಾನೇ ನಾಶವಾಗಬಹುದು. ಗಳಿಸಿದಾತನ ಮರಣಾನಂತರ ಅದು ಬೇರೆಯವರಿಗೆ ವರ್ಗವಾಗಬಹುದು. ಆದರೆ, ವಿದ್ಯೆ ಎಂಬ ಅಕ್ಷಯ ನಿಧಿ ಮಾತ್ರ ಮನುಷ್ಯ ತಾನು ಬದುಕಿರುವವರೆಗೂ ಕಳೆದುಕೊಳ್ಳಲಾರದ ಸಂಪತ್ತು. ಅದನ್ನು ಬೇರೆಯವರಿಗೆ ವರ್ಗಾಯಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ ಮುಂದಿನ ತಲೆಮಾರಿಗೆ ಬಿಡಲಾಗುವುದಿಲ್ಲ. ಅಂತಹ ವಾಙ್ಮಯಕ್ಕೆ ಸರಸ್ವತಿಯು ‘ತಾಯಿ’ ಎಂಬ ಪರಿಕಲ್ಪನೆ ಪಂಪನದು. ‘ಅಂಬಿಕೆ ಸರಸ್ವತಿ’ ಎಂಬಲ್ಲಿ ತಾಯಿಯಂತೆ ಅವಳು ಪ್ರೇಮಮಯಿ. ಹೀಗೆ ಜಿನೇಂದ್ರವಾಣಿಯಾಗಿ ಕಾಣಿಸಿಕೊಂಡ ಸರಸ್ವತಿ, ಆದಿಪುರಾಣದಲ್ಲಿ ವಾಗ್ವಧು ಆಗಿ, ಪಂಪಭಾರತದಲ್ಲಿ ಅಂಬಿಕೆಯಾಗಿ ಪರಿಪೂರ್ಣತೆಯತ್ತ ಸಾಗುತ್ತಾಳೆ.

   ಸುಮಾರು ಹತ್ತನೇ ಶತಮಾನದಲ್ಲಿಯೇ, ‘ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ ಪಂಪ ಮಹಾನ್ ಮಾನವತಾವಾದಿ; ಒಬ್ಬ ಶ್ರೇಷ್ಠ ಕವಿ. ಅವನ ಕಾವ್ಯಗಳು ಈ ಲೋಕಕ್ಕೆ ಅಲಂಕಾರಪ್ರಾಯವಾಗಿರುವವು. ‘ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಲಾಸ’ ಶ್ರೇಷ್ಠ ತರಗತಿಯದ್ದು. ಅಂತೆಯೇ ಆತನ ಸರಸ್ವತೀ ದರ್ಶನವೂ ಸಹ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ