‘ಗುಣಮುಖ’ ದ ಕೆಲವು ಗುಣಗಳು

ಮಂದ ಬೆಳಕಿನಲ್ಲಿ ಹೆಣಗಳ ರಾಶಿ. ಶವಪರೀಕ್ಷೆ ನಂತರ ನೀಟಾಗಿ ಅವನ್ನು ಕಟ್ಟಿಟ್ಟು ಸಾಲು ಸಾಲಾಗಿ ರಾಶಿ ಹಾಕಲಾಗಿದೆ. ಅಲ್ಲಿ ಆ ದಿಬ್ಬದಲ್ಲಿ, ಇಲ್ಲಿ ಕೆಳಗೆ ಎಲ್ಲೆಲ್ಲೂ ಹೆಣಗಳೇ. ಬದುಕುಳಿದವರನ್ನು ಗಾಲಿ ಕುರ್ಚಿಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸಾಗಿಸಲಾಗುತ್ತಿದೆ. ಗೂಬೆ ಕೂಗುತ್ತಿಲ್ಲ. ಆದರೆ ಅವು ಆಳವಾದ ನೋವಿನ ವಿಷಾದವನ್ನು ಹೊರಹೊಮ್ಮಿಸುತ್ತಿವೆಯೇನೋ ಎನ್ನುವ ಭ್ರಮೆ ಉಂಟು ಮಾಡುವ ತಣ್ಣನೆಯ ಹಿನ್ನೆಲೆಯ ಸಂಗೀತ.

ಕ್ರೌರ್ಯವೇ ಮಡುಗಟ್ಟಿದ ಇಂತಹ ದೃಶ್ಯದಿಂದ ‘ಗುಣಮುಖ’ ನಾಟಕ ತೆರೆದುಕೊಳ್ಳುತ್ತದೆ. ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಕಲಾಗ್ರಾಮದಲ್ಲಿ ಸಾದರಪಡಿಸಿದ ನಾಟಕ ಇದು. ನಿರ್ದೇಶಕ ಸಿ.ಬಸವಲಿಂಗಯ್ಯ, ಪರಿಕರ ಮತ್ತು ವಸ್ತ್ರಾಲಂಕಾರ ಪ್ರಮೋದ ಶಿಗ್ಗಾಂವ್‌, ರಂಗವಿನ್ಯಾಸ ಶಶಿಧರ ಅಡಪ. ಇನ್ನು ನಾಟಕ ಪಿ.ಲಂಕೇಶರ ‘ಗುಣಮುಖ’. ಇದಂತೂ ಅವರ ಮಾಸ್ಟರ್‌ಪೀಸ್‌.

ಪರ್ಷಿಯಾ ದೇಶದ ನಾದಿರ್‌ಶಾ, ದೆಹಲಿಯ ಸುಲ್ತಾನರನ್ನು ಸೋಲಿಸಿ ಕೆಲಕಾಲ ಆಳ್ವಿಕೆ ನಡೆಸಿದ ಕತೆ ಇದು. ಕ್ರೌರ್ಯ, ಅಟ್ಟಹಾಸ ಮೇರೆ ಮೀರಿದಷ್ಟು ಆಕ್ರಮಣಕಾರ ನಾದಿರ್‌ಶಾನ ಕಾಯಿಲೆ ಹೆಚ್ಚಾಗುತ್ತದೆ. ಗುಣಪಡಿಸಲಾಗದ ಕಾಯಿಲೆಯಿಂದ ಅವನು ನರಳುತ್ತಾನೆ. ಅವನನ್ನು ಸಹಜ ಸ್ಥಿತಿಗೆ ತಂದು, ಅಟ್ಟಹಾಸಕ್ಕೆ ಕಡಿವಾಣ ಹಾಕುವ ಮೂಲಕ ಹಕೀಮ ಅಲಾವಿಖಾನ್ ಅವನನ್ನು ಗುಣಪಡಿಸುತ್ತಾನೆ.

ಎರಡು ತಾಸಿನ ಈ ನಾಟಕಕ್ಕೆ ಮೂರು ದೃಶ್ಯಗಳಿವೆ. ಒಂದೊಂದು ದೃಶ್ಯವೂ ಅರ್ಧಗಂಟೆಗೂ ಅಧಿಕ. ದೆಹಲಿ ದೊರೆಗಳ ಕಾರ್ಯವೈಖರಿಯೇ ಇಲ್ಲಿದೆ, ವಿವರ ಸಮೃದ್ಧಿ ಇದೆ.

ಲಂಕೇಶರ ಸಶಕ್ತ ಸಂಭಾಷಣೆಗಳು ಅದನ್ನೆಲ್ಲ ಕಟ್ಟಿಕೊಡುತ್ತವೆ. ಸಂಭಾಷಣೆ ಬೇಕು ನಿಜ, ಅದು ನಾಟಕದ ಆತ್ಮವೂ ಹೌದು. ಆದರೆ ಸಂಭಾಷಣೆ ಕೇಳಲಷ್ಟೆ ಪ್ರೇಕ್ಷಕ ನಾಟಕಕ್ಕೆ ಬರುವುದಿಲ್ಲ. ಸಂಭಾಷಣೆಯನ್ನೂ ದೃಶ್ಯಗಳಲ್ಲೇ ವೀಕ್ಷಿಸಲು ಬರುತ್ತಾನೆ. ನಾಟಕಕ್ಕೊಬ್ಬ ನಿರ್ದೇಶಕ ಈ ಕಾರಣಕ್ಕೆ ಬೇಕಾಗುತ್ತಾನೆ. ಬಸವಲಿಂಗಯ್ಯ ಅದನ್ನಿಲ್ಲಿ ಸಮರ್ಥವಾಗಿ ಮಾಡಿದ್ದಾರೆ. ನಾದಿರ್‌ಶಾ ಪಾತ್ರವನ್ನು ಇಲ್ಲಿ ಮೂವರು ಮಾಡಿದ್ದಾರೆ.

ಒಂದು ಪಾತ್ರ ಅವನ ಆಕ್ರಮಣಕಾರಿ ಪ್ರವೃತ್ತಿಯನ್ನು ಮಾತುಗಳಿಂದ ಹೊರಗೆಡಹಲು, ಮತ್ತೊಂದು ಪಾತ್ರ ಅವನ ಕಾಯಿಲೆಯ ಸ್ವರೂಪವನ್ನು ಬಿಂಬಿಸಲು, ಇನ್ನೊಂದು ಅವನ ಬಾಹ್ಯರೂಪವನ್ನು ಕಾಣಿಸಲು.

ಗಂಭೀರವಾದ ಸಂಭಾಷಣೆ ಆಲಿಸುತ್ತ ಮುವತ್ತರಿಂದ ನಲವತ್ತು ನಿಮಿಷ ಮೈ ಬಿಗಿಹಿಡಿದು ಕುಳಿತುಕೊಳ್ಳುವುದು ಯಾರಿಗಾದರೂ ಕಷ್ಟವೇ. ಅಲ್ಲಲ್ಲಿ ‘ರಿಲೀಫ್’ (ಬಿಡುಗಡೆ) ಬೇಕು. ನಮಾಜು, ಸುಲ್ತಾನರ ಮೋಜು ಮಸ್ತಿ ಮುಂತಾದ ತುಣುಕುಗಳು ಅಲ್ಲಲ್ಲಿ ಪ್ರೇಕ್ಷಕನ ಬಿಗು ಮೌನಕ್ಕೆ ಬಿಡುಗಡೆ ನೀಡುತ್ತವೆ.

ದೆಹಲಿ ದೊರೆಗಳ ಕ್ರೌರ್ಯ, ಅಟ್ಟಹಾಸ, ಕನಸು, ಸೋಲು, ವಿಷಾದ -ಎಲ್ಲವನ್ನೂ ಸೂಚಿಸಲು ಹಿಂದೂಸ್ತಾನಿ ಸಂಗೀತದ ವಾದ್ಯಗಳು ಮತ್ತು ಆಲಾಪವೇ ಹೆಚ್ಚು ಸೂಕ್ತವೇನೋ ಎನ್ನುವಷ್ಟು ಪರಿಣಾಮಕಾರಿಯಾಗಿ ಮುದ್ರಿತ ಸಂಗೀತವನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ.

ತಬಲಾ ವಾದನವಂತೂ ಸನ್ನಿವೇಶಗಳ ಪರಿಣಾಮ ಹೆಚ್ಚಿಸಿದೆ. ಕ್ರೌರ್ಯ, ವಿಷಾದಕ್ಕೂ ತಬಲಾವೇ ಸಾಥ್! ಕುಳಿತರೆ ಪುಟಿಯುವ ಸೋಫಾ ಮಾದರಿಯ ಹಾಸಿಗೆ, ದಿವಾನರುಗಳ ಮನೆಯ ವಿನ್ಯಾಸ, ನಾದಿರ್‌ಶಾನ ಚಿಕಿತ್ಸೆಗೆ ಇಟ್ಟಿರುವ ತಾಮ್ರದ ಪಾತ್ರೆಗಳು, ಪ್ರೇಕ್ಷಕರು ಆಘ್ರಾಣಿಸುವಂತೆ ದೃಶ್ಯಗಳಲ್ಲಿ ಚೆಲ್ಲುವ ಲೋಬಾನ– ಹೀಗೆ ನಾಟಕದ ಪ್ರತಿಯೊಂದು ಪರಿಕರ, ರಂಗವಿನ್ಯಾಸ ನಾಟಕದ ಪರಿಣಾಮ ಹೆಚ್ಚಿಸಿದೆ. ಪರಿಕರ ಮತ್ತು ವಸ್ತ್ರಾಲಂಕಾರ ಮಾಡಿದ ಪ್ರಮೋದ ಶಿಗ್ಗಾಂವ್‌, ರಂಗವಿನ್ಯಾಸ ಮಾಡಿದ ಶಶಿಧರ ಅಡಪ ಅಭಿನಂದನಾರ್ಹರು.

ಲಂಕೇಶರ ನಾಟಕಗಳ ಪೈಕಿ ಹೆಚ್ಚು ಪ್ರದರ್ಶನ ಕಂಡಿರುವುದರಲ್ಲಿ ‘ಗುಣಮುಖ’ವೂ ಒಂದು. ಹಲವು ನಿರ್ದೇಶಕರು ಇದನ್ನು ತಮ್ಮದೇ ರೀತಿಯಲ್ಲಿ ಕಂಡಿರಿಸಿದ್ದಾರೆ. ತಮ್ಮ ತಮ್ಮ ಶಕ್ತ್ಯಾನುಸಾರ ಹಾಗೂ ತಮ್ಮ ಬಂಡವಾಳದ ಮಿತಿಯಲ್ಲಿ ಮಾಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ